ತನಿಖೆ	 -	
 	ದಂಡ ಪ್ರಕ್ರಿಯಾ ಸಂಹಿತೆಯ ರೀತ್ಯ ಪುರಾವೆಯನ್ನು ಕಲೆಹಾಕಲು ಪೊಲೀಸ್ ಅಧಿಕಾರಿಯೋ ದಂಡನ್ಯಾಯಾಧೀಶರು ಈ ಬಗ್ಗೆ ನೇಮಕ ಮಾಡುವ ಯಾವುದೇ ವ್ಯಕ್ತಿಯೋ ಕೈಗೊಳ್ಳುವ ನಡವಳಿಕೆ (ಇನ್ವೆಸ್ಟಿಗೇಷನ್). ಪುರಾವೆಯನ್ನು ಕಲೆಹಾಕುವುದು ಎಂದರೆ 1. ಅಪಕೃತ್ಯ ನಡೆದ ಸ್ಥಳಕ್ಕೆ ಹೋಗುವುದು: 2. ಕೃತ್ಯಕ್ಕೆ ಸಂಬಂಧಿಸಿದ ಸನ್ನಿವೇಶ ಮತ್ತು ಅಂಶಗಳನ್ನು ಪತ್ತೆಹಚ್ಚುವುದು: 3. ಕೃತ್ಯ ನಡೆಸಿರಬಹುದೆಂಬ ಶಂಕೆಗೆ ಒಳಗಾದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನನ್ನು ಬಂಧಿಸುವುದು: 4. ಕೃತ್ಯ ನಡೆದಿರುವುದರ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುವುದು- ಎಂದರೆ ಆಪಾದಿತನನ್ನೂ ಇತರ ವ್ಯಕ್ತಿಗಳನ್ನೂ ವಿಚಾರಿಸುವುದು ಮತ್ತು ಅವರ ಹೇಳಿಕೆಗಳನ್ನು ಬರವಣಿಗೆಗೆ ಇಳಿಸುವುದು. ಸ್ಥಳ ಪರಿಶೀಲನೆ, ಕೃತ್ಯಕ್ಕೆ ಸಂಬಂಧಿಸಿದ, ತನಿಖೆಗೆ ಅಗತ್ಯವಾದ, ನ್ಯಾಯಾಲಯದಲ್ಲಿ ಹಾಜರು ಮಾಡಬೇಕಾದ ವಸ್ತುಗಳನ್ನು ವಶಪಡಿಸಿಕೊಳ್ಳುವುದು: 5. ಹೀಗೆ ಸಂಗ್ರಹಿಸಿದ ಪುರಾವೆಯ ಆಧಾರದ ಮೇಲೆ ಆಪಾದಿತನನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸಬೇಕೆ, ಬೇಡವೆ ಎಂಬ ಬಗ್ಗೆ ಒಂದು ಅಭಿಪ್ರಾಯ ತಳೆಯುವುದು ಮತ್ತು ವಿಚಾರಣೆಗೆ ಒಳಪಡಿಸಬೇಕೆನ್ನುವುದಾದರೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಕ್ಕ ಕ್ರಮ ಕೈಗೊಳ್ಳುವುದು. 

ಗಣನಾರ್ಹ ಅಪರಾಧಿಗಳಿಗೆ ಸಂಬಂಧಿಸಿದ ಕೃತ್ಯದಲ್ಲಿ ತನಿಖೆ ಮಾಡಲು ಪೊಲೀಸರಿಗೇ ಕಾನೂನುಬದ್ಧ ಹಕ್ಕುಂಟು. ಇದಕ್ಕೆ ಅವರಿಗೆ ನ್ಯಾಯಾಧೀಶರಿಂದ ಪ್ರಾಧಿಕಾರ ಬೇಕಿಲ್ಲ. ದಂಡ ನ್ಯಾಯಾಧೀಶರಾಗಲಿ ರಾಜ್ಯದ ಉಚ್ಚ ನ್ಯಾಯಾಲಯವಾಗಲಿ ಪೊಲೀಸರು ಕೈಗೊಂಡ ತನಿಖೆಯಲ್ಲಿ ಪ್ರವೇಶಿಸುವಂತಿಲ್ಲ. ಗಣನಾರ್ಹ ಕೃತ್ಯದಲ್ಲಿ ಪೊಲೀಸರು ತನಿಖೆ ಮಾಡುತ್ತಿರುವಾಗ ದಂಡನ್ಯಾಯಾಧೀಶರು ಅದನ್ನು ನಿಲ್ಲಿಸಿ, ತಾವಾಗಲಿ ತಮ್ಮ ಕೈಕೆಳಗಿನ ಅಧಿಕಾರಿಯಾಗಲಿ ಆ ತನಿಖೆಯನ್ನು ನಡೆಸಲಾಗುವುದಿಲ್ಲ. ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯ ಸರಹದ್ದಿನೊಳಗೆ ನಡೆದ ಕೃತ್ಯಗಳನ್ನು ಮಾತ್ರ ತನಿಖೆ ಮಾಡಬೇಕು.
ಒಂದು ಪೊಲೀಸ್ ಠಾಣೆಯ ನಿರ್ವಹಣಾಧಿಕಾರಿಯ ಮೇಲ್ಪಟ್ಟ ಪೊಲೀಸ್ ಅಧಿಕಾರಿ ತನ್ನ ಕಾರ್ಯವ್ಯಾಪ್ತಿಯುಳ್ಳ ಭಾಗದಲ್ಲಿ ನಡೆಯವ ತನಿಖೆಯ ಬಗ್ಗೆ ಒಂದು ಪೊಲೀಸ್ ಠಾಣೆಯ ನಿರ್ವಹಣಾಧಿಕಾರಿಗೆ ಇರುವ ಅಧಿಕಾರಗಳನ್ನೆಲ್ಲ ಚಲಾಯಿಸಬಹುದು. ಪೊಲೀಸ್ ಠಾಣೆಯ ನಿರ್ವಹಣಾಧಿಕಾರಿಯ ಕೈಕೆಳಗಿನ ಅಧಿಕಾರಿಗೆ ತನಿಖೆಗೆ ಸಂಬಂಧಿಸಿದ ಯಾವುದೇ ಹಂತದ ಕಾರ್ಯವನ್ನು ವಹಿಸಬಹುದು. ಆದರೆ, ತನ್ನ ಕೈಕೆಳಗಿನ ಅಧಿಕಾರಿ ನಡೆಸುವ ತನಿಖೆಯ ಪ್ರತಿಯೊಂದು ಹಂತದ ಕಾರ್ಯಕ್ಕೂ ಪೊಲೀಸ್ ಠಾಣೆಯ ನಿರ್ವಹಣಾಧಿಕಾರಿಯೇ ಜವಾಬ್ದಾರ: ಏಕೆಂದರೆ, ತಾನು ನಿರ್ವಹಿಸಬೇಕಾದ ಕಾರ್ಯವನ್ನು ಬೇರೆಯವರಿಗೆ ನರ್ಗಾಯಿಸುವ ಹಕ್ಕು ಅವನಿಗಿರುವುದಿಲ್ಲ. ಇಷ್ಟಾದರೂ ತನಿಖೆಯ ಅಂತಿಮ ಘಟ್ಟವಾದ., ಆಪಾದಿತನನ್ನು ವಿಚಾರಣೆಗೆ ಒಳಪಡಿಸಬೇಕೆ ಬೇಡವೆ ಎಂಬುದರ ಬಗ್ಗೆ ಅಭಿಪ್ರಾಯ ತಳೆಯುವ ಪೂರ್ಣ ಅಧಿಕಾರ ಪೊಲೀಸ್ ಠಾಣೆಯ ನಿರ್ವಹಣಾಧಿಕಾರಿಗೆ ಮಾತ್ರ ಉಂಟು. 

ಪೊಲೀಸ್ ಅಧಿಕಾರಿ ನಡೆಸುವ ಈ ತೆರನಾದ ತನಿಖೆ ನ್ಯಾಯಾಂಗ ವಿಚಾರಣಾ ನಡವಳಿಕೆಯಾಗುವುದಿಲ್ಲ. 

ಗಣನಾರ್ಹವಲ್ಲದ ಅಪರಾಧಗಳ ಬಗ್ಗೆ ಪೊಲೀಸರು ಮೊಕದ್ದಮೆಯನ್ನು ದಾಖಲು ಮಾಡಿಕೊಳ್ಳದೆ ಹೋದರೆ, ಸಂಬಂಧಪಟ್ಟ ವ್ಯಕ್ತಿ ದಂಡ ನ್ಯಾಯಾಧೀಶನಿಗೆ ತನ್ನ ಫಿರ್ಯಾದನ್ನು ಸಲ್ಲಿಸಬಹುದು. ದಂಡ ನ್ಯಾಯಾಧೀಶ ತನಗೆ ಸಲ್ಲಿಸಲಾದ ಫಿರ್ಯಾದಿನ ಆಧಾರದ ಮೇಲೆ ಪೊಲೀಸ್ ಅಧಿಕಾರಿಗೆ ತನಿಖೆ ನಡೆಸುವಂತೆ ಆದೇಶ ನೀಡಬಹುದು. ದಂಡ ನ್ಯಾಯಾಧೀಶರ ಈ ಆದೇಶ ಪೊಲೀಸರಿಗೆ ತನಿಖೆಯ ಬಗ್ಗೆ ಇರುವ ಅಧಿಕಾರವನ್ನು ಯಾವುದೇ ರೀತಿಯಲ್ಲೂ ಮೊಟುಕುಗೊಳಿಸುವುದಿಲ್ಲ. ಹೀಗೆ ಪೊಲೀಸರಿಗೆ ಆದೇಶ ನೀಡುವ ಅಧಿಕಾರ ದಂಡ ನ್ಯಾಯಾಧೀಶರಿಗೆ ಸೇರಿದ್ದೇ ವಿನಾ ಸೆಷನ್ಸ್ ನ್ಯಾಯಾಧೀಶರಿಗೆ ಸೇರಿದ್ದಲ್ಲ	.								(ವಿ.ಎಚ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ